ಇಕ್ಕೋಡು-
ಸಂಯುಕ್ತ ಸೋಪಾಧಿಕ ಪಕ್ಷಾಂತರ ನ್ಯಾಯಕ್ಕೆ ತರ್ಕಶಾಸ್ತ್ರದಲ್ಲಿ ಈ ಹೆಸರಿದೆ (ಡೈಲೆಮ). ಇಕ್ಕೋಡಿನಲ್ಲಿ ಸಾಧ್ಯಪ್ರತಿಜ್ಞೆ ಯಾವಾಗಲೂ ಸೋಪಾಧಿಕ (ಹೈಪೊತೆಟಿಕಲ್), ಪಕ್ಷಪ್ರತಿಜ್ಞೆ ಸಾಮಾನ್ಯವಾಗಿ ಪಕ್ಷಾಂತರ (ಡಿಸ್‍ಜಂಕ್ಟಿವ್), ನಿತ್ಯಜೀವನದಲ್ಲಿ ಕೆಲವುವೇಳೆ ನಮ್ಮ ಮುಂದೆ ಎರಡುಪಕ್ಷಗಳಿದ್ದು ಯಾವ ಒಂದು ಪಕ್ಷವನ್ನು ಹಿಡಿದರೂ ಪರಿಣಾಮ ಏಕರೀತಿಯಲ್ಲಿ ಪ್ರತಿಕೂಲವಾಗಿರುತ್ತದೆ. ವಾದದಲ್ಲೂ ಹೀಗೆಯೇ. ಎರಡು ಪಕ್ಷದಲ್ಲಿ ಯಾವುದನ್ನು ಒಪ್ಪಿದರೂ ಪ್ರತಿಕೂಲವೇ ಆಗುತ್ತದೆ. ವಾದ ಮಾಡುವಾಗ ಎರಡು ಪ್ರತಿಕೂಲ ಪರಿಣಾಮಗಳ ಮಧ್ಯೆ ಸಿಕ್ಕಿಕೊಂಡರೆ ನಾವು ಇರುಬುನಲ್ಲಿದ್ದೇವೆ ಎಂದು ಹೇಳುವುದು ವಾಡಿಕೆ. ಉಭಯ ಸಂಕಟಕ್ಕೆ ಈಡುಮಾಡುವ ಇಂಥ ಪರಿಸ್ಥಿತಿಗೆ ಇಕ್ಕೋಡು ಎಂದು ಹೆಸರು. ಪ್ರತಿಕೂಲ ಪರಿಣಾಮಗಳನ್ನುಳ್ಳ ಎರಡು ಪಕ್ಷಗಳನ್ನು ಇಕ್ಕೋಡಿನ ಎರಡು ಕೋಡುಗಳು ಎನ್ನುತ್ತೇವೆ. ಜಟ್ಟಿ ಗೂಳಿಯೊಡನೆ ಗುದ್ದಾಡುವಾಗ ಒಂದು ಕೊಂಬಿನಿಂದ ತಪ್ಪಿಸಿಕೊಂಡರೂ ಇನ್ನೊಂದು ಕೊಂಬು ಜಟ್ಟಿಯನ್ನು ಇರಿಯಲು ಸಿದ್ಧವಾಗಿರುತ್ತದೆ. ಡೈಲೆಮ ಎಂಬ ಪದವನ್ನು ಗ್ರೀಕ್ ತಾರ್ಕಿಕರು ಗೂಳಿಗಾಳಗದ ಪರಿಭಾಷೆಯಿಂದ ತೆಗೆದುಕೊಂಡಿದ್ದಾರೆ. ಅದು ಈಗಲೂ ಬಳಕೆಯಲ್ಲಿದೆ. 

ಇಕ್ಕೋಡಿನ ವಾದ ನಾಲ್ಕು ರೂಪಗಳನ್ನು ಪಡೆಯಬಹುದು. 1. ಸರಳ ವಿಧಿರೂಪ. 2. ಸರಳ ಪ್ರತಿಷೇಧ ರೂಪ. 3. ಸಂಕೀರ್ಣ ವಿಧಿರೂಪ. 4. ಸಂಕೀರ್ಣ ಪ್ರತಿಷೇಧ ರೂಪ : ಈ ನಾಲ್ಕಕ್ಕೂ ಇವು ಸಕ್ರಮ ಉದಾಹರಣೆಗಳು. 1. ಸ್ವಬುದ್ಧಿಯಿಂದ ಬಾಳಿದರೆ ಸ್ವಪ್ರತಿಷ್ಠೆಯವನೆಂದು ಜನ ಜರೆಯುತ್ತಾರೆ; ಇತರರ ಮಾತಿನಂತೆ ಬಾಳಿದರೆ ಬೆನ್ನೆಲುಬಿಲ್ಲದವನೆಂದು ಜರೆಯುತ್ತಾರೆ. ಒಬ್ಬ ಸ್ವಬುದ್ಧಿಯಿಂದ ಬಾಳಬೇಕು ಅಥವಾ ಇತರರ ಮಾತಿನಂತೆ ನಡೆಯಬೇಕು. ಹೇಗಾದರೂ ಜನ ಜರೆಯುತ್ತಾರೆ. 2. ಒಂದು ಪದಾರ್ಥ ಚಲಿಸಬೇಕಾದರೆ ಅದು ತಾನಿರುವ ಸ್ಥಳದಲ್ಲಿರಬೇಕು. ಅಥವಾ ತಾನಿಲ್ಲದ ಸ್ಥಳದಲ್ಲಿರಬೇಕು. ಅದು ತಾನಿರುವ ಸ್ಥಳದಲ್ಲಿ ಚಲಿಸಲಾರದು. 3. ಪುಸ್ತಕಾಲಯದಲ್ಲಿರುವ ಪುಸ್ತಕಗಳು ಕುರಾನಿನ ತತ್ತ್ವಗಳನ್ನೇ ಒಳಗೊಂಡಿದ್ದರೆ ಅವು ಅನಾವಶ್ಯಕವಾದುವು; ಅವು ಕುರಾನಿಗೆ ವಿರುದ್ಧವಾಗಿದ್ದರೆ ದುಷ್ಟವಾದುವು. ಅವು ಕುರಾನಿನಲ್ಲಿರುವ ತತ್ತ್ವಗಳನ್ನು ಒಳಗೊಂಡಿರಬೇಕು ಅಥವಾ ಅದಕ್ಕೆ ವಿರುದ್ಧವಾಗಿರಬೇಕು. ಆದ್ದರಿಂದ ಈ ಪುಸ್ತಕಗಳು ಅನಾವಶ್ಯಕವಾದುವು ಅಥವಾ ದುಷ್ಟವಾದುವು. 4. ಈ ಅಧಿಕಾರಿ ತನ್ನ ಕರ್ತವ್ಯವನ್ನು ಮಾಡಿದರೆ ನಿಬಂಧನೆಗಳಿಗೆ ವಿಧೇಯನಾಗಿರುತ್ತಾನೆ. ಬುದ್ಧಿವಂತನಾದರೆ ನಿಬಂಧನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾನೆ. ಈತ ನಿಭಂದನೆಗಳಿಗೆ ವಿಧೇಯನಾಗಿಲ್ಲ ಅಥವಾ ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಆದ್ದರಿಂದ ಈತ ತನ್ನ ಕರ್ತವ್ಯವನ್ನು ಮಾಡಿಲ್ಲ ಅಥವಾ ಈತ ಬುದ್ಧಿವಂತನಲ್ಲ. 

ಇಕ್ಕೋಡಿನ ವಾದವನ್ನು ಪ್ರತಿವಾದಿಗೆ ದಿಗ್ಭ್ರಮೆ ಹುಟ್ಟಿಸಲು ಅಥವಾ ಅವನ ಕಣ್ಣಿಗೆ ಮಣ್ಣೆರಚಲು ಉಪಯೋಗಿಸುವುದೇ ಸಾಧಾರಣ. ಹಾಗೆ ಉಪಯೋಗಿಸಿದಾಗ ಈ ಮೂರರಲ್ಲಿ ಯಾವುದಾದರೂ ಲೋಪವಿರುತ್ತದೆ. (i) ಸಾಧ್ಯ ವಾಕ್ಯದಲ್ಲಿ ಎಲ್ಲ ಪಕ್ಷಗಳೂ ಪೂರ್ತಿಯಾಗಿ ಸೇರಿರುವುದಿಲ್ಲ; ಅಥವಾ (ii) ಎರಡು ಪಕ್ಷಗಳು ಒಂದನ್ನೊಂದು ಬಹಿಷ್ಕರಿಸುವುದಿಲ್ಲ; ಅಥವಾ (iii) ಪದಗಳು ಸಾಧ್ಯವಾಕ್ಯದಲ್ಲಿ ಒಂದು ಅರ್ಥದಲ್ಲೂ ಪಕ್ಷವಾಕ್ಯದಲ್ಲಿ ಬೇರೊಂದು ಅರ್ಥದಲ್ಲೂ ಉಪಯೋಗವಾಗಿರುತ್ತವೆ. ಇಂಥ ಸಂದರ್ಭಗಳಲ್ಲಿ ಪ್ರತಿವಾದಿಗೆ ಮೂರು ಮಾರ್ಗಗಳಿವೆ. ಮೊದಲನೆಯದಾಗಿ, ಈ ಎರಡನ್ನು ಬಿಟ್ಟು ಬೇರೆ ಪಕ್ಷಗಳಿವೆ ಎಂದು ತೋರಿಸಿ ಇಕ್ಕೋಡಿನ ಮಧ್ಯೆ ನುಸುಳಿಕೊಳ್ಳಬಹುದು. ಎರಡನೆಯದಾಗಿ, ಪಕ್ಷದ ಮೊದಲಿನ ಭಾಗಕ್ಕೂ ಎರಡನೆಯ ಭಾಗಕ್ಕೂ ನಿಕಟಸಂಬಂಧವಿಲ್ಲವೆಂದು ತೋರಿಸಿ ಕೊಂಬನ್ನು ಜಗ್ಗಿಸಿ ಊನಪಡಿಸಬಹುದು. ಮೂರನೆಯದಾಗಿ, ವಾದಿಯ ಕುತಂತ್ರವನ್ನೇ ತಿರುಮಂತ್ರವಾಗಿ ಉಪಯೋಗಿಸಿಕೊಂಡು ಅವನಿಗೆ ಅನಾನುಕೂಲವಾದ ಪ್ರತಿಸವಾಲು ಹಾಕಬಹುದು. 

ಎಲ್ಲ ಇಕ್ಕೋಡಿನ ವಾದಗಳೂ ದೋಷಯುತವಾಗಿರಬೇಕಾದ್ದಿಲ್ಲ. ಮೇಲೆ ಹೇಳಿದ ದೋಷವಿಲ್ಲದ ಇಕ್ಕೋಡಿನ ವಾದವನ್ನು ರಚಿಸಬಹುದು. ದುಷ್ಟವಾದವನ್ನು ಮೂರು ಬಗೆಯಾಗಿ ಖಂಡಿಸಬಹುದು: (i) ಕೋಡುಗಳ ಮಧ್ಯೆ ನುಸಿದು ತಪ್ಪಿಸಿಕೊಳ್ಳುವುದು. ಇರುವ ಎರಡಲ್ಲದೆ ಮೂರನೆಯ ಪಕ್ಷ ಒಂದಿದೆ ಎಂದು ಸಾಧಿಸಿದಲ್ಲಿ ಈ ಕೆಲಸ ಸುಗಮವಾಗುತ್ತದೆ. (ii) ಕೋಡುಗಳನ್ನು ಜಗ್ಗಿಸಿ ಕಿತ್ತುಹಾಕುವುದು. ಎರಡು ಕೋಡುಗಳಿಗೂ ಪರಸ್ಪರ ಸಂಬಂಧವಿಲ್ಲವೆಂಬುದನ್ನು ಸಾಧಿಸಿದರೆ ಈ ಕೆಲಸ ಸುಲಭವಾಗುತ್ತದೆ. (iii) ಇರುವ ಇಕ್ಕೋಡನ್ನು ಹುಸಿಯೆನಿಸಲು ಬೇರೊಂದು ಇಕ್ಕೋಡನ್ನು ರಚಿಸುವುದು. 	 			
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ